ಚಕ್ರವರ್ತಿ ನಿರಂಜನ ಪ್ರಸಾದ್  -
1893-1956. ಭಾರತದ ಪ್ರಸಿದ್ಧ ಶಾಸನತಜ್ಞ, ಸಂಸ್ಕøತ ವಿದ್ವಾಂಸ. ಪಶ್ಚಿಮ ಬಂಗಾಲದ ನದಿಯಾ ಜಿಲ್ಲೆಯ ಕೃಷ್ಣಾಗರ್‍ನಲ್ಲಿ 1893ರ ಜುಲೈ 1ರಂದು ಜನಿಸಿದರು. ಎಂ. ಎ. ಪದವೀಧರರಾದ ಮೇಲೆ ಇವರು 1917ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಸಂಸ್ಕøತ ಮತ್ತು ಪಾಲಿ ಅಧ್ಯಾಪಕರಾದರು. ಯೂರೋಪಿನಲ್ಲಿ ಅಧ್ಯಯನಕ್ಕಾಗಿ 1921ರಲ್ಲಿ ಭಾರತ ಸರ್ಕಾರದ ವ್ಯಾಸಂಗ ವೇತನವೊಂದು ಇವರಿಗೆ ಲಭಿಸಿತು. ಇವರು ಪ್ಯಾರಿಸಿನ ಸಾರ್ ಬಾನ್ ವಿಶ್ವವಿದ್ಯಾಲಯದಲ್ಲೂ ಬರ್ಲಿನ್ ವಿಶ್ವವಿದ್ಯಾಲಯದಲ್ಲೂ ಅಧ್ಯಯನ ನಡೆಸಿದರು. 1924ರಲ್ಲಿ ಇವರು ಇಂಗ್ಲೆಂಡಿಗೆ ಹೋದರು. 1926ರಲ್ಲಿ ಇವರಿಗೆ ಕೇಂಬ್ರಿಜ್ ವಿಶ್ವವಿದ್ಯಾಲಯದ ಡಾಕ್ಟರ್ ಆಫ್ ಫಿಲಾಸಫಿ ಪದವಿ ಲಭಿಸಿತು. ಭಾರತಕ್ಕೆ ಹಿಂದಿರುಗಿದ ಚಕ್ರವರ್ತಿಯವರು 1929ರಲ್ಲಿ ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣ ವಿಭಾಗವನ್ನು ಸೇರಿ ಉದಕಮಂಡಲದಲ್ಲಿ ಶಾಸನ ಉಪ ಸೂಪರಿಂಟೆಂಡೆಂಟ್ ಆದರು. ಸಂಶೋಧನ ಕಾರ್ಯದಲ್ಲಿ ಚಕ್ರವರ್ತಿಯವರು ತೋರಿಸಿದ ಶ್ರದ್ಧೆ ಆಸಕ್ತಿಗಳಿಂದಾಗಿ ಇವರಿಗೆ 1934ರಲ್ಲಿ ಭಾರತದ ಸರ್ಕಾರಿ ಶಾಸನತಜ್ಞರ ಹುದ್ಧೆ ಪ್ರಾಪ್ತವಾಯಿತು. 1940ರಲ್ಲಿ ಇವರು ನವದೆಹಲಿಯಲ್ಲಿ ಪುರಾತತ್ವ ಉಪನಿರ್ದೇಶಕರೂ 1948ರಲ್ಲಿ ಮಹಾನಿರ್ದೇಶಕರೂ ಆದರು. ಇವರು ಆ ಹುದ್ಧೆಯಿಂದ ನಿವೃತ್ತಿ ಹೊಂದಿದ್ದು 1950ರಲ್ಲಿ. 1950-52ರಲ್ಲಿ ಎನ್.ಪಿ. ಚಕ್ರವರ್ತಿಯವರು ಪುರಾತತ್ವ ಇಲಾಖೆಯಲ್ಲಿ ಸಲಹೆಗಾರರಾಗಿದ್ದರು. ಆನಂತರ ಇವರು ಸಂಸತ್ ಭವನದ ಗೋಡೆಗಳ ಮೇಲೆ ನಾಗರಿಕತೆಯ ಉದಯದಿಂದ ಸ್ವಾತಂತ್ರ್ಯದವರೆಗಿನ ಭಾರತದ ಇತಿಹಾಸದ ಮುಖ್ಯ ಘಟನೆಗಳ ಚಿತ್ರಣದಲ್ಲಿ ನಿರತರಾಗಿದ್ದ ಕಲಾವಿದರ ದಿಗ್ದರ್ಶನಾಧಿಕಾರಿಯಾಗಿ ನೇಮಕವಾಗಿದ್ದರು. 1956ರಲ್ಲಿ ತೀರಿಕೊಳ್ಳುವವರೆಗೂ ಈ ಅಧಿಕಾರದಲ್ಲಿದ್ದರು.

ಪುರಾತತ್ವ ಹಾಗೂ ಶಾಸನ ಕ್ಷೇತ್ರದಲ್ಲಿ ಇವರು ಮಾಡಿರುವ ಕೆಲಸ ನಾನಾಮುಖವಾದ್ದು. ಇವರು ಸರ್ಕಾರಿ ಶಾಸನತಜ್ಞರಾಗಿದ್ದಾಗ ಎಪಿಗ್ರಾಫಿಯ ಇಂಡಿಕದ ಘಿಘಿII-ಘಿಘಿಗಿI ಸಂಪುಟಗಳನ್ನು ಸಂಪಾದಿಸಿದರು. 1948ರಲ್ಲಿ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಭಾರತದ ಸಾಂಸ್ಕøತಿಕ ಪರಂಪರೆಯನ್ನು ಕುರಿತು ಚಕ್ರವರ್ತಿಯವರು ನೀಡಿದ ಉಪನ್ಯಾಸ ಇವರ ಪಾಂಡಿತ್ಯದ ಆಳ-ಹರಹುಗಳ ದ್ಯೋತಕವಾಗಿದೆ. 1954ರಲ್ಲಿ ಅಹಮದಾಬಾದಿನಲ್ಲಿ ನಡೆದ ಭಾರತದ ಇತಿಹಾಸ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಭಾರತಶಾಸ್ತ್ರದ ಸಮಸ್ಯೆಗಳು ಮತ್ತು ಅದರ ಭವಿಷ್ಯವನ್ನು ಕುರಿತು ಇವರು ನೀಡಿದ ಉಪನ್ಯಾಸ ಆ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಎಲ್ಲ ವಿದ್ವಾಂಸರ ಗಮನ ಸೆಳೆಯಿತು. ಭಾರತ ಪುರಾತತ್ವ ಸರ್ವೇಕ್ಷಣ ಇಲಾಖೆಯ ವಾರ್ಷಿಕ ವರದಿಗಳೇ ಅಲ್ಲದೆ ಹಲವು ವಿದ್ಯುತ್ ಪತ್ರಿಕೆಗಳಿಗೆ ಚಕ್ರವರ್ತಿಯವರು ಅಭ್ಯಾಸಪೂರ್ಣವಾದ ಲೇಖನಗಳನ್ನು ಬರೆದಿದ್ದಾರೆ. ಎಪಿಗ್ರಾಫಿಯ ಇಂಡಿಕಕ್ಕೆ ಇವರು ಸಲ್ಲಿಸಿರುವ ಲೇಖನಗಳೂ ಹಲವು. ಬಿ.ಆರ್. ಚಟರ್ಜಿಯವರ 'ಇಂಡಿಯ ಅಂಡ್ ಜಾವ ಗ್ರಂಥದಲ್ಲಿ ಜಾವದ ಶಾಸನಗಳ ಸಂಪಾದನ ಕಾರ್ಯ ಮಾಡಿದವರು ಇವರು. ಯಾಜ್ದಾನಿಯವರ ಅಜಂತ ಗ್ರಂಥದ 3ನೆಯ ಭಾಗದಲ್ಲಿ ಶಾಸನಗಳನ್ನು ಕುರಿತು ಬರೆದಿದ್ದಾರೆ. ಇವರು ದೇಶವಿದೇಶಗಳ ಹಲವಾರು ವಿದ್ವತ್ ಸಂಘ ಸಂಸ್ಥೆಗಳ ಸದಸ್ಯರಾಗಿದ್ದರು. ಬಂಗಾಲದ ರಾಯಲ್ ಏಷ್ಯಾಟಿಕ್ ಸೊಸೈಟಿಯ ಫೆಲೊ ಆಗಿದ್ದರಲ್ಲದೆ ಲಂಡನಿನ ರಾಯಲ್ ಸೊಸೈಟಿ ಆಫ್ ಇಂಡಿಯ ಅಂಡ್ ಪಾಕಿಸ್ತಾನ್‍ನ ಉಪಾಧ್ಯಕ್ಷರೂ ಯುನೆಸ್ಕೊ ರಚಿಸಿದ ಅಂತರಾಷ್ಟ್ರೀಯ ನಿವೇಶನ ಮತ್ತು ವಸ್ತುಸಂಗ್ರಹಾಲಯ ಸಮಿತಿಯ ಮತ್ತು ಅಖಿಲ ಭಾರತ ಲಲಿತ ಮತ್ತು ಕುಶಲಕಲಾ ಸಂಘದ ಉಪಾಧ್ಯಕ್ಷರೂ ಆಗಿದ್ದರು.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ